ಕಲಬುರ್ಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ಸೊನ್ನ ಗ್ರಾಮದಲ್ಲಿ ಇಂದು ಬೆಳಿಗ್ಗೆ ಕುಡಿಯುವ ನೀರಿನ ತೀವ್ರ ಅಭಾವದಿಂದ ಬೇಸತ್ತ ಸಾರ್ವಜನಿಕರು ಗ್ರಾಮ ಪಂಚಾಯತಿಗೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದರು.ಹಾಲಿ ಹಲವು ದಿನಗಳಿಂದ ಗ್ರಾಮದಲ್ಲಿ ನೀರು ಸರಬರಾಜು ಅಸ್ತವ್ಯಸ್ತವಾಗಿದ್ದು, ಸಾರ್ವಜನಿಕರು ತೀವ್ರ ಸಂಕಷ್ಟ ಅನುಭವಿಸುತ್ತಿದ್ದರು. ಈ ಹಿನ್ನೆಲೆಯಲ್ಲಿ ಇಂದು ಬೆಳಿಗ್ಗೆ ಊರಿನ ನೂರಾರು ಮಹಿಳೆಯರು ಮತ್ತು ಪುರುಷರು ಕೈಯಲ್ಲಿ ಖಾಲಿ ಕೋಡ ಹಾಗೂ ಪಾತ್ರೆಗಳನ್ನು ಹಿಡಿದು ಗ್ರಾಮ ಪಂಚಾಯತಿ ಕಚೇರಿಯ ಮುಂದೆ ಸೇರಿ ಘೋಷಣೆ ಕೂಗಿದರು.ಘಟನೆಯ ಮಾಹಿತಿ ತಿಳಿದು ತಾಲ್ಲೂಕು ಮಟ್ಟದ ಅಧಿಕಾರಿಗಳು ಹಾಗೂ ಪೋಲಿಸ್ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ, ಜನರ ಮನವಿ ಆಲಿಸಿದರು. ನಂತರ ಅಧಿಕಾರಿಗಳು ತಕ್ಷಣ ಸಮಸ್ಯೆ ಪರಿಹರಿಸಲು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. ಈ ಭರವಸೆ ಬಳಿಕ ಪ್ರತಿಭಟನಾಕಾರರು ಶಾಂತವಾಗಿ ವಾಪಸ್ಸಾದರು.ಪ್ರತಿಭಟನೆಯಲ್ಲಿ ವಿಜಯಕುಮಾರ್ ಬಿರೆದಾರ, ಶರಣುಗೌಡ ಸಲಗರ, ವಿಜಕುಮಾರ ಧರೆನ, ನಿಂಗಣ್ಣ, ಬಸವರಾಜ ಸಲಗರ, ಭಾಗೇಶ್ ಸರ್ನಾಳ ಸೇರಿದಂತೆ ಅನೇಕ ಗ್ರಾಮಸ್ಥರು ಭಾಗವಹಿಸಿ ತಮ್ಮ ಅಸಮಾಧಾನ ವ್ಯಕ್ತಪಡಿಸಿದರು.ಗ್ರಾಮಸ್ಥರ ಪ್ರಕಾರ, “ನೀರು ಇಲ್ಲದೆ ದಿನನಿತ್ಯದ ಜೀವನ ಅಸ್ತವ್ಯಸ್ತವಾಗಿದೆ, ಹಲವಾರು ಬಾರಿ ಮನವಿ ಮಾಡಿದರೂ ಫಲಿತಾಂಶ ಸಿಗದ ಕಾರಣವಾಗಿ ಮುತ್ತಿಗೆ ಹಾಕಬೇಕಾಯಿತು” ಎಂದು ಹೇಳಿದರು.ಸ್ಥಳೀಯ ಅಧಿಕಾರಿಗಳು ನೀರಿನ ಸಮಸ್ಯೆ ಶೀಘ್ರದಲ್ಲೇ ಪರಿಹಾರವಾಗಲಿದೆ ಎಂದು ಭರವಸೆ ನೀಡಿರುವುದರಿಂದ ಈಗ ಗ್ರಾಮಸ್ಥರು ಸರ್ಕಾರದ ಕ್ರಮದತ್ತ ಕಣ್ಣು ಹಾಕಿದ್ದಾರೆ.
ವರದಿ: ರವಿ ಕುಮಾರ್ ತಳವಾರ್ ಜೇವರ್ಗಿ

