ಅವಮಾನಕಾರಿ ಹೇಳಿಕೆ ವಿವಾದ: ಹಾಸ್ಯನಟಿ ನಯನಾ ವಿರುದ್ಧ ದಲಿತ ಸೇನೆ ದೌರ್ಜನ್ಯ ತಡೆ ಕಾಯ್ದೆ ಅಡಿಯಲ್ಲಿ ಕ್ರಮಕ್ಕೆ ಒತ್ತಾಯ.

ಕಲಬುರ್ಗಿ, ನ.18:ಮೈಸೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಹಾಸ್ಯನಟಿ ನಯನಾ ಮಾಡಿದ ‘ಹೊಲಸು’, ‘ಹೊಲಗೇರಿ’ ಎಂಬ ನಿಷೇಧಿತ ಹಾಗೂ ಅವಹೇಳನಕಾರಿ ಪದಬಳಕೆ ಗಂಭೀರ ವಿರೋಧಕ್ಕೆ ಗುರಿಯಾಗಿದೆ. ಶೋಷಿತ ಸಮುದಾಯದ ಭಾವನೆಗಳಿಗೆ ಧಕ್ಕೆ ತಂದು ಜಾತಿ ಆಧಾರಿತವಾಗಿ ಅವಮಾನ ಮಾಡಿದ್ದಾರೆ ಎಂಬ ಆರೋಪದ ಹಿನ್ನೆಲೆ, ದಲಿತ ಸೇನೆಯ ಜಿಲ್ಲಾಧ್ಯಕ್ಷ ಮಂಜುನಾಥ ಭಂಡಾರಿ ಅವರು ಕಲಬುರಗಿ ಸಬ್‌ಅರ್ಬನ್ ಪೊಲೀಸ್ ಠಾಣೆಯಲ್ಲಿ ಅಧಿಕೃತ ದೂರು ಸಲ್ಲಿಸಿದ್ದಾರೆ.ದೂರು ಪ್ರಕಾರ, ಅಕ್ಟೋಬರ್ 29 ರಂದು ಮೈಸೂರು ಮೆಟ್ರೋ ಮನಿಮಿಥಾ ಚೀಟ್ ಫಂಡ್ ಕುರಿತಾಗಿ ಮಾತನಾಡುವಾಗ, ನಯನಾ “ಹೊಲಗೇರಿ ಮಾಡ್ತಾರೆಲ್ಲ”, “ಹೊಲಸು–ಹೊಲಗೇರಿ” ಎಂಬ ನಿಷೇಧಿತ ಪದಗಳನ್ನು ಬಳಕೆ ಮಾಡಿದ್ದು, ಶೋಷಿತ ಸಮುದಾಯವನ್ನು ಟಾರ್ಗೆಟ್ ಮಾಡಿ ಅವಹೇಳನ ಮಾಡಿದ್ದಾರೆ. “ಇದು ಅವರಲ್ಲಿ ಅಡಕವಾಗಿರುವ ಜಾತಿಯ ಮನೋಭಾವದ ಪ್ರತಿಬಿಂಬ. ಸಮುದಾಯಕ್ಕೆ ನೋವುಂಟು ಮಾಡುವ ರೀತಿಯಲ್ಲಿ ಮಾತನಾಡಿರುವುದು ಖಂಡನೀಯ” ಎಂದು ದೂರು ಹೇಳಿದೆ.ಈ ಕುರಿತಂತೆ ಮಾತನಾಡಿದ ಮಂಜುನಾಥ ಭಂಡಾರಿ, “ಹೀಗೆ ಜಾತಿ ಆಧಾರಿತ ಪದಗಳನ್ನು ಬಳಸುವ ಮೂಲಕ ಸಮಾಜದಲ್ಲಿ ವಿಭಜನೆಯನ್ನು ಉಂಟುಮಾಡುವ ಪ್ರಯತ್ನ ನಡೆದಿದೆ. ದೌರ್ಜನ್ಯ ತಡೆ ಕಾಯ್ದೆಯಡಿ ತಕ್ಷಣ ಕಠಿಣ ಕ್ರಮ ಕೈಗೊಳ್ಳಬೇಕು” ಎಂದು ಆಗ್ರಹಿಸಿದರು.ಅವರ ಆಗ್ರಹಕ್ಕೆ ನಗರ ಅಧ್ಯಕ್ಷ ಅರವಿಂದ ಕಮಲಾಪೂರ, ಪ್ರಧಾನ ಕಾರ್ಯದರ್ಶಿ ಶಿವಕುಮಾರ ಗೋಲಾ, ದಲಿತ ಸೇನೆ ನಗರ ಮುಖ್ಯ ಕಾರ್ಯದರ್ಶಿ ಕಾನು ಕೋವಿ ಸೇರಿದಂತೆ ಹಲವರು ಬೆಂಬಲ ವ್ಯಕ್ತಪಡಿಸಿ ಘಟನೆಯ ಖಂಡನೆ ವ್ಯಕ್ತಪಡಿಸಿದ್ದಾರೆ.ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪ್ರಕರಣ ತನಿಖೆಯಲ್ಲಿದೆ.

Leave a Reply

Your email address will not be published. Required fields are marked *

error: Content is protected !!