
ಅಫಜಲಪೂರ: ತಾಲೂಕಿನ ದೇವಲ ಗಾಣಗಾಪೂರದದತ್ತಾತ್ರೇಯ ದೇವಸ್ಥಾನದ ಸಾಲಕಾರಿ ಕಾರ್ಯದರ್ಶಿಯಾಗಿ ವರ್ಷದ ಅವಧಿಗಾಗಿ ಅರ್ಚಕ ಪ್ರಿಯಾಂಕ್ ಭಟ್ ಪೂಜಾರಿ ನೇಮಕಗೊಂಡಿದ್ದಾರೆ.ನಂತರ ಅವರು ಮಾತನಾಡಿ, ದೇಶದ ನಾನಾ ರಾಜ್ಯಗಳ ಸಹಸ್ರಾರು ಭಕ್ತರ ಶ್ರದ್ದೆ, ಆರಾಧನಾ ಸ್ಥಳವಾಗಿರುವ ಗಾಣಗಾಪೂರಕ್ಕೆ ನಿತ್ಯ ಸಾವಿರಾರು ಭಕ್ತರು ಬಂದು ಹೋಗುತ್ತಾರೆ, ವಿಶೇಷವಾಗಿ ಹುಣ್ಣಿಮೆ ಸಮಯದಲ್ಲಿ, ದತ್ತ ಜಯಂತಿ, ಗುರು ಪೂರ್ಣಿಮೆ, ದೀಪಾವಳಿ ಸಂದರ್ಭಗಳಲ್ಲಿ ಲಕ್ಷಾಂತರ ಭಕ್ತರು ಗಾಣಗಾಪೂರ ಕ್ಷೇತ್ರಕ್ಕೆ ಬಂದು ದರ್ಶನ ಪಡೆದುಕೊಳ್ಳುತ್ತಾರೆ. ಇಲ್ಲಿಗೆ ಬರುವ ಭಕ್ತರಿಗೆ ಅನುಕೂಲವಾಗುವ ರೀತಿಯಲ್ಲಿ ದರ್ಶನ ವ್ಯವಸ್ಥೆ, ಪ್ರಸಾದ ವ್ಯವಸ್ಥೆಗಳನ್ನು ಈ ಹಿಂದಿನಿಂದ ದೇವಸ್ಥಾನದ ಸಮಸ್ತ ಅರ್ಚಕ ಮಂಡಳಿಯರು, ದೇವಸ್ಥಾನದ ಆಡಳಿತ ಅಧಿಕಾರಿಗಳು, ಸಿಬ್ಬಂದಿಗಳು ಜವಾಬ್ದಾರಿಯಿಂದ ಕೆಲಸ ಮಾಡಿದ್ದಾರೆ. ಮುಂದೆ ಕೂಡ ಇದೇ ರೀತಿ ಭಕ್ತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಉತ್ತಮ ಕೆಲಸಗಳನ್ನು ಮಾಡಲಾಗುತ್ತದೆ. ಎಲ್ಲ ಹಿರಿಯ/ಕಿರಿಯ ಅರ್ಚಕರು, ಆಡಳಿತ ಅಧಿಕಾರಿ ವರ್ಗ, ಸ್ಥಳೀಯರ ಸಹಕಾರ ಪಡೆದು ದೇವಸ್ಥಾನದ ಉನ್ನತಿಗಾಗಿ ಎಲ್ಲರೂ ಕೂಡಿ ಕೆಲಸ ಮಾಡುತ್ತೇವೆ ಎಂದರು. ಈ ಹಿಂದೆ ನಮ್ಮ ಕುಟುಂಬದ ಸಾಲಕಾರಿ ಪಾಳಿ ಇದ್ದಾಗ ನಿರ್ಗುಣ ಮಠದ ಗರ್ಭಗುಡಿಯಲ್ಲಿನ ಪಾದುಕಾ ದರ್ಶನ ಮತ್ತು ತ್ರಿಮೂರ್ತಿ ದರ್ಶನವನ್ನು ಗರ್ಭಗುಡಿಯಿಂದ ಹೊರಗಡೆ ತಂದು ಎಲ್ಲ ಭಕ್ತರಿಗೂ ಉಚಿತವಾಗಿ ದರ್ಶನ ವ್ಯವಸ್ಥೆ ಕಲ್ಪಿಸುವಂತೆ ಮಾಡಲಾಗಿತ್ತು. ಈ ಬಾರಿಯೂ ಇಂತಹ ಅನೇಕ ಭಕ್ತ ಕಲ್ಯಾಣದ ಕೆಲಸಗಳನ್ನು ಎಲ್ಲರ ಸಹಕಾರ ಪಡೆದು ಮಾಡುತೇವೆ ಎಂದು ತಿಳಿಸಿದರು.
