
ಕಲಬುರ್ಗಿ: “ಭಾರತಕ್ಕೆ ಸ್ವಾತಂತ್ರ್ಯ ದೊರೆತ ನಂತರ 565ಕ್ಕೂ ಹೆಚ್ಚು ಸಂಸ್ಥಾನಗಳನ್ನು ಭಾರತ ಒಕ್ಕೂಟದಲ್ಲಿ ವಿಲೀನಗೊಳಿಸುವ ಮೂಲಕ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರು ದೇಶದ ಏಕತೆ ಮತ್ತು ಅಖಂಡತೆಯನ್ನು ಕಾಪಾಡಲು ನೀಡಿದ ಕೊಡುಗೆ ಅಪಾರವಾಗಿದೆ” ಎಂದು ಉಪನ್ಯಾಸಕ ಎಚ್.ಬಿ. ಪಾಟೀಲ್ ಹೇಳಿದ್ದಾರೆ.ನಗರದ ಆಳಂದ ರಸ್ತೆಯ ಖಾದ್ರಿ ಚೌಕ್‌ನಲ್ಲಿ ಇರುವ ಸಕ್ಸಸ್ ಕಂಪ್ಯೂಟರ್ ತರಬೇತಿ ಕೇಂದ್ರದಲ್ಲಿ ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ಶುಕ್ರವಾರ ಬೆಳಿಗ್ಗೆ “ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ 150ನೇ ಜನ್ಮದಿನ – ರಾಷ್ಟ್ರೀಯ ಏಕತಾ ದಿನಾಚರಣೆ”ಯನ್ನು ಭಾವಪೂರ್ಣವಾಗಿ ಆಚರಿಸಲಾಯಿತು.ಕಾರ್ಯಕ್ರಮದ ಅಂಗವಾಗಿ ಏಕತೆಯ ಪ್ರತಿಜ್ಞೆ ವಿಧಿ ಭೋಧಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಎಚ್.ಬಿ. ಪಾಟೀಲ್ ಅವರು, “ದೇಶದ ಏಕೀಕರಣಕ್ಕೆ ಪಟೇಲ್ ಅವರ ಪಾತ್ರ ಅತ್ಯಂತ ಮಹತ್ವದ್ದು. ಅವರಲ್ಲಿ ಇದ್ದ ದೇಶಪ್ರೇಮ, ದೃಢನಿಶ್ಚಯ ಹಾಗೂ ನಾಯಕತ್ವ ಗುಣಗಳು ಇಂದಿನ ಯುವ ಪೀಳಿಗೆಗೆ ಮಾದರಿಯಾಗಿದೆ. ಅವರನ್ನು ‘ಭಾರತದ ಏಕೀಕರಣದ ರೂವಾರಿ’ ಎಂದು ಕರೆಯುವುದು ಗೌರವಯುಕ್ತ” ಎಂದು ಹೇಳಿದರು.ಸಂಸ್ಥೆಯ ಅಧ್ಯಕ್ಷ ಅಸ್ಲಾಂ ಶೇಖ್ ಮಾತನಾಡಿ, “ದೇಶದ ಪ್ರತಿಯೊಬ್ಬರೂ ಒಂದೇ ಎಂಬ ಮನೋಭಾವನೆ ಬೆಳೆಸಿಕೊಳ್ಳಬೇಕು. ಧರ್ಮ, ಭಾಷೆ, ಜಾತಿ ಬೇಧವಿಲ್ಲದೆ ಎಲ್ಲರೂ ಒಂದೇ ರಾಷ್ಟ್ರದ ನಾಗರಿಕರು ಎಂಬ ಭಾವನೆ ನಮ್ಮೊಳಗಿರಬೇಕು. ಏಕತೆಯೇ ನಮ್ಮ ಮೂಲಮಂತ್ರವಾಗಬೇಕು” ಎಂದು ಹೇಳಿದರು.ಕಾರ್ಯಕ್ರಮದಲ್ಲಿ ಸಮಾಜ ಸೇವಕ ಶಿವಯೋಗೆಪ್ಪಾ ಎಸ್. ಬಿರಾದಾರ ಸೇರಿದಂತೆ ಸಂಸ್ಥೆಯ ಸಿಬ್ಬಂದಿ, ವಿದ್ಯಾರ್ಥಿಗಳು ಹಾಗೂ ಸ್ಥಳೀಯ ಗಣ್ಯರು ಉಪಸ್ಥಿತರಿದ್ದರು.
