
ಅಫಜಲಪೂರ :ತಾಲ್ಲೂಕಿನ ದೇವಲ ಗಾಣಗಾಪೂರ ಪೊಲೀಸ್ ಠಾಣೆ ವತಿಯಿಂದ ಶುಕ್ರವಾರ ಬೆಳಗ್ಗಿನ ಜಾವ ರಾಷ್ಟ್ರೀಯ ಏಕತಾ ದಿನದ ಅಂಗವಾಗಿ ಹಾಗೂ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಜನ್ಮದಿನದ ಪ್ರಯುಕ್ತ ಭವ್ಯ ಮ್ಯಾರಥಾನ್ ಓಟದ ಸ್ಪರ್ಧೆಯನ್ನು ಆಯೋಜಿಸಲಾಯಿತು.ಕಾರ್ಯಕ್ರಮದ ಆರಂಭದಲ್ಲಿ ಸಸಿ ನೆಡುವ ಮೂಲಕ ಪರಿಸರ ಸಂರಕ್ಷಣೆ ಮತ್ತು ಏಕತೆಯ ಸಂಕೇತವಾಗಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ನಂತರ ಪಿಎಸ್ಐ ಕುಮಾರಿ ಸಂಗೀತ ಶಿಂಧೆ ಅವರು ಭಾಗವಹಿಸಿದ ಸ್ಪರ್ಧಾರ್ಥಿಗಳಿಗೆ ರಾಷ್ಟ್ರೀಯ ಏಕತೆಯ ಪ್ರತಿಜ್ಞಾ ವಿಧಿ ಬೋಧಿಸಿ ಎಲ್ಲರೂ ದೇಶದ ಏಕತೆ ಮತ್ತು ಅಖಂಡತೆಯಿಗಾಗಿ ಶ್ರಮಿಸಬೇಕು ಎಂದು ಕರೆ ನೀಡಿದರು.ಪಿಎಸ್ಐ ಕುಮಾರಿ ಸಂಗೀತ ಶಿಂಧೆ ಅವರ ನೇತೃತ್ವದಲ್ಲಿ ಮ್ಯಾರಥಾನ್ ಓಟಕ್ಕೆ ಚಾಲನೆ ನೀಡಲಾಯಿತು. ಈ ಓಟವು ಠಾಣೆ ಆವರಣದಿಂದ ಪ್ರಾರಂಭವಾಗಿ ಅಂಬಿಗರ ಚೌಡಯ್ಯ ವೃತ್ತದ ಮೂಲಕ ಎಚ್‌ಪಿ ಪೆಟ್ರೋಲ್ ಪಂಪ್ವರೆಗೆ ನಡೆಯಿತು. ಯುವಕರು, ವಿದ್ಯಾರ್ಥಿಗಳು ಹಾಗೂ ಸ್ಥಳೀಯರು ಉತ್ಸಾಹದಿಂದ ಸ್ಪರ್ಧೆಯಲ್ಲಿ ಭಾಗವಹಿಸಿದರು.ಓಟದ ಕೊನೆಯಲ್ಲಿ ಪ್ರಥಮ ಹಾಗೂ ದ್ವಿತೀಯ ಸ್ಥಾನ ಪಡೆದ ಸ್ಪರ್ಧಾರ್ಥಿಗಳಿಗೆ ವಿಶೇಷವಾಗಿ ಬಹುಮಾನ ವಿತರಿಸಲಾಯಿತು.ಕಾರ್ಯಕ್ರಮದಲ್ಲಿ ಕ್ರೈಂ ಪಿಎಸ್ಐ ಶ್ರೀಮತಿ ಶ್ರೀದೇವಿ ಕಟ್ಟಿ, ಊರಿನ ಹಿರಿಯ ಮುಖಂಡರು, ಗಣ್ಯರು ಹಾಗೂ ಠಾಣೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.ರಾಷ್ಟ್ರೀಯ ಏಕತಾ ದಿನದ ಹಿನ್ನೆಲೆಯಲ್ಲಿ ಆಯೋಜಿಸಲಾದ ಈ ಮ್ಯಾರಥಾನ್ ಓಟವು ಸಾರ್ವಜನಿಕರಲ್ಲಿ ದೇಶಾಭಿಮಾನ, ಏಕತೆ ಮತ್ತು ಸಹಕಾರದ ಮನೋಭಾವ ಬೆಳೆಸುವಲ್ಲಿ ಯಶಸ್ವಿಯಾಯಿತು.
