
ಅಫಜಲಪೂರ:ತಾಲೂಕು ಕೇಂದ್ರದಲ್ಲಿ ನಡೆದ 70ನೇ ಕನ್ನಡ ರಾಜ್ಯೋತ್ಸವದ ವೇದಿಕೆ ಕಾರ್ಯಕ್ರಮಕ್ಕೆ ಶಾಸಕ ಎಂ.ವೈ. ಪಾಟೀಲ್ ಗೈರಾಗಿದ್ದ ಹಿನ್ನೆಲೆಯಲ್ಲಿ, ಕರ್ನಾಟಕ ರಕ್ಷಣಾ ವೇದಿಕೆ ಸೇರಿದಂತೆ ಅನೇಕ ಕನ್ನಡಪರ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿ ಕಾರ್ಯಕ್ರಮವನ್ನು ಬಹಿಷ್ಕರಿಸಿ ಹೊರನಡೆದ ಘಟನೆ ಇಂದು ಅಫಜಲಪೂರದಲ್ಲಿ ನಡೆದಿದೆ.ಪಟ್ಟಣದ ತಹಸೀಲ್ದಾರ್ ಕಚೇರಿ ಎದುರಿನ ಸರಕಾರಿ ಪ್ರೌಢ ಶಾಲೆಯ ಆವರಣದಲ್ಲಿ ನಡೆದ ರಾಜ್ಯೋತ್ಸವ ಸಮಾರಂಭವು ಅದ್ಧೂರಿಯಾಗಿ ಆರಂಭಗೊಂಡಿತ್ತು. ಬೆಳಿಗ್ಗೆ ತಹಸೀಲ್ದಾರ್ ಕಚೇರಿಯಲ್ಲಿ ಧ್ವಜಾರೋಹಣ ನೆರವೇರಿಸಿ ಶಾಸಕರು ಅನ್ಯ ಕಾರ್ಯಕ್ರಮ ನಿಮಿತ್ತ ಸ್ಥಳ ತೊರೆದು ಹೋದ ಹಿನ್ನೆಲೆಯಲ್ಲಿ, ವೇದಿಕೆ ಕಾರ್ಯಕ್ರಮಕ್ಕೆ ಅವರು ಹಾಜರಾಗದೆ ಉಳಿದರು.ಈ ಹಿನ್ನೆಲೆಯಲ್ಲಿ ಕನ್ನಡಪರ ಸಂಘಟನೆಗಳ ಕಾರ್ಯಕರ್ತರು “ಶಾಸಕರು ವೇದಿಕೆ ಕಾರ್ಯಕ್ರಮಕ್ಕೆ ಬಾರದೆ ಕನ್ನಡ ಭಾಷೆ ಹಾಗೂ ಕನ್ನಡ ಸಾಧಕರಿಗೆ ಅಗೌರವ ತೋರಿದ್ದಾರೆ” ಎಂದು ಆಕ್ರೋಶ ವ್ಯಕ್ತಪಡಿಸಿದರು. ಅನೇಕ ಸಾಧಕರು ಹಾಗೂ ವಿವಿಧ ಕ್ಷೇತ್ರಗಳಲ್ಲಿ ಪ್ರತಿಭೆ ತೋರಿದವರು ಶಾಸಕರಿಂದ ಗೌರವ ಸ್ವೀಕರಿಸಲು ನಿರೀಕ್ಷೆಯಲ್ಲಿದ್ದರು. ಆದರೆ ಶಾಸಕರ ಗೈರುಹಾಜರಾತಿ ಕಾರಣದಿಂದ ಅವರಿಗೆ ನಿರಾಶೆ ಮೂಡಿದೆ ಎಂದು ಸಂಘಟನೆಯ ಸದಸ್ಯರು ಖೇದ ವ್ಯಕ್ತಪಡಿಸಿದರು.ಪರಿಣಾಮವಾಗಿ, ಕರ್ನಾಟಕ ರಕ್ಷಣಾ ವೇದಿಕೆ ಸೇರಿದಂತೆ ಹಲವು ಕನ್ನಡಪರ ಸಂಘಟನೆಗಳ ಪ್ರತಿನಿಧಿಗಳು ಕಾರ್ಯಕ್ರಮದಿಂದ ಬಹಿಷ್ಕಾರ ಹಾಕಿ ಹೊರನಡೆದಿದ್ದಾರೆ. ಈ ಘಟನೆ ತಾಲ್ಲೂಕಿನಲ್ಲಿ ಚರ್ಚೆಗೆ ಗ್ರಾಸವಾಗಿದೆ.
