
ಶಹಾಬಾದ್ ನ.1:ಶಹಾಬಾದ್ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 150 (ಎನ್‌ಎಚ್) ಮಾರ್ಗದಲ್ಲಿರುವ ಕಾಗಿಣ ಮೇಲ್ಸೇತುವೆ ಬಳಿ ಇಂದು ಸಾಯಂಕಾಲ 6:00 ಗಂಟೆ ಸುಮಾರಿಗೆ ಬಸ್ ಹಾಗೂ ಲಾರಿ ಡಿಕ್ಕಿಯಾಗಿ ಅಲ್ಪ ಅಂತರದಲ್ಲಿ ದೊಡ್ಡ ಅನಾಹುತ ತಪ್ಪಿದ ಘಟನೆ ನಡೆದಿದೆ.ಸ್ಥಳೀಯ ಮೂಲಗಳ ಪ್ರಕಾರ, ಮೇಲ್ಸೇತುವೆ ಭಾಗದಲ್ಲಿ ರಸ್ತೆ ಅಗಲಿಕೆ ಹಾಗೂ ಕಾಮಗಾರಿ ನಡೆಯುತ್ತಿರುವುದರಿಂದ ಮಾರ್ಗ ಸಂಕುಚಿತಗೊಂಡಿತ್ತು. ಯಾವುದೇ ರೀತಿಯ ಸುರಕ್ಷತಾ ಕ್ರಮಗಳಿಲ್ಲದೆ ಕಾಮಗಾರಿ ನಡೆಯುತ್ತಿದ್ದ ಸಂದರ್ಭದಲ್ಲಿ ಕಲಬುರಗಿ–ಚಿತ್ತಾಪುರ ಮಾರ್ಗದಲ್ಲಿ ಸಂಚರಿಸುತ್ತಿದ್ದ ಬಸ್‌ಗೆ ಹಿಂಭಾಗದಿಂದ ಲಾರಿಯೊಂದು ಬ್ರೇಕ್ ಫೇಲ್ ಆಗಿ ಡಿಕ್ಕಿ ಹೊಡೆದಿದೆ.ಅದೃಷ್ಟವಶಾತ್ ಬಸ್‌ನಲ್ಲಿದ್ದ ಪ್ರಯಾಣಿಕರು ಹಾಗೂ ಲಾರಿ ಚಾಲಕರು ಯಾವುದೇ ರೀತಿಯ ಗಾಯಗಳಿಲ್ಲದೆ ಪಾರಾಗಿದ್ದಾರೆ. ಪ್ರಯಾಣಿಕರನ್ನು ಬಳಿಕ ಮತ್ತೊಂದು ಬಸ್ ಮುಖಾಂತರ ಅವರ ಗಮ್ಯಸ್ಥಾನಗಳಿಗೆ ಸುರಕ್ಷಿತವಾಗಿ ಕಳುಹಿಸಲಾಗಿದೆ.ರಸ್ತೆ ಕಾಮಗಾರಿಯ ಅವ್ಯವಸ್ಥೆ, ತಗ್ಗು–ಗುಂಡಿಗಳು ಹಾಗೂ ಅಗಲಿಕೆಯ ಕೊರತೆ ಈ ಅಪಘಾತಕ್ಕೆ ಕಾರಣವಾಗಿದೆ ಎಂದು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.ಅಪಘಾತದ ಮಾಹಿತಿ ತಿಳಿದ ಶಹಾಬಾದ್ ಪೊಲೀಸ್ ಠಾಣೆಯ ಸಿಬ್ಬಂದಿ ತಕ್ಷಣ ಸ್ಥಳಕ್ಕೆ ಧಾವಿಸಿ ವಾಹನ ಸಂಚಾರ ನಿಯಂತ್ರಿಸಿ, ಟ್ರಾಫಿಕ್ ಜಾಮ್ ನಿವಾರಣೆ ಮಾಡಿ ಪ್ರಯಾಣಿಕರಿಗೆ ಸಹಕಾರ ನೀಡಿದರು.ವರದಿ: ಅನಿಲಕುಮಾರ್ ಮೈನಾಳಕರ್, ಶಹಾಬಾದ್
