
“ಕನ್ನಡ ನಮ್ಮ ಹೃದಯ, ಬಸ್ಸೇ ನಮ್ಮ ಮನೆ” ಎಂಬ ಅರ್ಥಪೂರ್ಣ ಸಂದೇಶವನ್ನು ಜೀವಂತಗೊಳಿಸಿರುವ ಅಫಜಲಪೂರ ಬಸ್ ಘಟಕದ ಚಾಲಕ ನಾಗಪ್ಪ ಉಪ್ಪಿನ ಹಾಗೂ ನಿರ್ವಾಹಕ ಸೂರ್ಯಕಾಂತ ವಗ್ಗಾಲೆ ಅವರು ಕಳೆದ ಹತ್ತು ವರ್ಷಗಳಿಂದ ತಮ್ಮ ಖರ್ಚಿನಲ್ಲಿ ಬಸ್ಸನ್ನು ಕನ್ನಡಾಭಿಮಾನದಿಂದ ಅಲಂಕರಿಸುತ್ತಿದ್ದಾರೆ.ಪ್ರತಿ ವರ್ಷ ಕನ್ನಡ ರಾಜ್ಯೋತ್ಸವದ ಅಂಗವಾಗಿ ತಮ್ಮ ಸೇವೆಯ ಬಸ್ಸಿಗೆ ಮದುವಣಗಿತ್ತಿಯಂತೆ ಅಲಂಕಾರ ಮಾಡುವುದು ಇವರ ವಿಭಿನ್ನ ಪರಂಪರೆ. ಈ ವರ್ಷವೂ ಸಹ ಸಾವಿರಾರು ರೂಪಾಯಿಗಳ ವೆಚ್ಚದಲ್ಲಿ ಬಸ್ಸನ್ನು ಕಂಗೊಳಿಸಿದ್ದು, ಅದರ ಕಿಟಕಿಗಳಲ್ಲಿ ಕನ್ನಡ ಕವಿಗಳ ಭಾವಚಿತ್ರಗಳು, ಎರಡು ಬದಿಗಳಲ್ಲಿ ಧ್ವನಿವರ್ಧಕ ವ್ಯವಸ್ಥೆ — ಸಂಪೂರ್ಣ ಕನ್ನಡಾಭಿಮಾನದಿಂದ ಹೊಳೆಯುವ ನೋಟ ನೀಡಿತು.ಅಫಜಲಪೂರದಿಂದ ಕಲಬುರಗಿಯವರೆಗೆ ಬಸ್ಸು ಸಂಚರಿಸಿದಾಗ, ದಾರಿಯುದ್ದಕ್ಕೂ ಜನರು ಆರತಿಹಚ್ಚಿ ಇವರ ಕನ್ನಡ ಪ್ರೇಮಕ್ಕೆ ಅಭಿವಂದನೆ ಸಲ್ಲಿಸಿದರು. ಈ ಅನನ್ಯ ಕನ್ನಡಾಭಿಮಾನಕ್ಕೆ ಗೌರವ ಸೂಚಿಸಲು ವಿಭಾಗೀಯ ನಿಯಂತ್ರಣಾಧಿಕಾರಿ ಸುನೀಲಕುಮಾರ ಚಂದರಿಗಿ ಅವರು ಬಸ್ಸಿಗೆ ಪುಷ್ಪಾರ್ಚನೆ ಮಾಡಿ ಸಂತಸ ವ್ಯಕ್ತಪಡಿಸಿದರು.ಈ ಸಂದರ್ಭದಲ್ಲಿ ವಿಭಾಗೀಯ ಸಂಚಾರಾಧಿಕಾರಿ ರವೀಂದ್ರಕುಮಾರ ಡಿಗ್ಗಿ, ಕಾರ್ಮಿಕ ಕಲ್ಯಾಣಾಧಿಕಾರಿ ಶ್ರೀಮತಿ ಶಾರದಾದೇವಿ, ಸಹಾಯಕ ಲೆಕ್ಕಾಧಿಕಾರಿ ವೆಂಕಟೇಶ್ ಜನಾದ್ರಿ, ಸಹಾಯಕ ಕಾರ್ಯನಿರ್ವಾಹಕ ಶಾಂತರೆಡ್ಡಿ, ಸಹಾಯಕ ಅಂಕಿ ಸಂಖ್ಯಾಧಿಕಾರಿ ಮಲ್ಲಿನಾಥ ಸರಂಸಬಿ, ನಿಲ್ದಾಣಾಧಿಕಾರಿ ಕೃಷ್ಣ ಪವಾರ, ಹಾಗೂ ವಿ.ನಿ. ಆಪ್ತ ಸಹಾಯಕ ರವಿ ಕುಲಕರ್ಣಿ ಉಪಸ್ಥಿತರಿದ್ದರು.ಸುನೀಲಕುಮಾರ ಚಂದರಿಗಿಯವರು ಮಾತನಾಡಿ —“ನಾಗಪ್ಪ ಮತ್ತು ಸೂರ್ಯಕಾಂತ ವಗ್ಗಾಲೆ ಅವರಂತಹ ಕನ್ನಡಾಭಿಮಾನಿಗಳು ಸಂಸ್ಥೆಗೆ ಹೆಮ್ಮೆ. ಅವರ ಈ ನಿಸ್ವಾರ್ಥ ಪ್ರಯತ್ನ ಯುವ ಪೀಳಿಗೆಗೆ ಪ್ರೇರಣೆ ಆಗಬೇಕು,” ಎಂದು ಪ್ರಶಂಸೆ ವ್ಯಕ್ತಪಡಿಸಿದರು. ದಶಕದಿಂದ ಕನ್ನಡದ ಸೌಂದರ್ಯ ಬಸ್ಸಿನ ಚಕ್ರಗಳೊಂದಿಗೆ ಹರಡಿಸುತ್ತಿರುವ ನಾಗಪ್ಪ ಹಾಗೂ ಸೂರ್ಯಕಾಂತ ವಗ್ಗಾಲೆ – ಅಫಜಲಪೂರ ಘಟಕದ ಅಪ್ಪಟ ಕನ್ನಡ ಹೃದಯಗಳು!
